ರಾಜಕೋಟೆ
ಭಾರತದ ಗುಜರಾತ್ ರಾಜ್ಯದ ಒಂದು ಜಿಲ್ಲೆ ಹಾಗೂ ಆಡಳಿತ ಕೇಂದ್ರ ನಗರ.  ಈ ಜಿಲ್ಲೆಯಲ್ಲಿ ದಕ್ಷಿಣದಲ್ಲಿ ಜುನಾಘಡ.  ಅಮರೇಲಿ ಜಿಲ್ಲೆಗಳೂ ಪಶ್ಚಿಮದಲ್ಲಿ ಜಾಂ ನಗರ ಜಿಲ್ಲೆಯೂ ಆಗ್ನೇಯ ಮತ್ತು ಪೂರ್ವಕ್ಕೆ ಸುರೇಂದ್ರ ನಗರ ಮತ್ತು ಭಾವನಗರಗಳೂ ಉತ್ತರದಲ್ಲಿ ಕಚ್ ಜಿಲ್ಲೆಯೂ ಸುತ್ತುವರೆದಿವೆ.  ಜಿಲ್ಲಾ ವಿಸ್ತೀರ್ಣ 11203 ಚ. ಕಿ. ಮೀ. ಜನಸಂಖ್ಯೆ 2509142 (1991).

ರಾಜಕೋಟೆ ಹಾಗೂ ಇತರ ಜಿಲ್ಲೆಗಳಲ್ಲಿ ದೊರಕುವ ಬೆಲೆಬಾಳುವ ಕಲ್ಲುಗಳು ಗುಜರಾತಿನ ಖಂಬಾತ್ ಮತ್ತು ಸೂರತ್ತಿನ ಕಲಾವಿದರ ಕೈಗಳಲ್ಲಿ ಸುಂದರ ರೂಪಗಳನ್ನು ತಳೆದು ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದಿವೆ.  ಜಿಲ್ಲೆಯಲ್ಲಿ ಕೆಲವು ತೊರೆಗಳು ಇದ್ದು ಇವು ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ.  ವಿವಿಧ ಕಾಳುಗಳು, ಕಬ್ಬು ಮತ್ತು ಹತ್ತಿಯನ್ನು ಹೆಚ್ಚಾಗಿ ಬೆಳೆಯುವರು.  ಹತ್ತಿ ಮತ್ತು ಉಣ್ಣೆ ಬಟ್ಟೆಗಳ ತಯಾರಿಕೆ ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ.

ರಾಜಕೋಟೆ ಜಿಲ್ಲೆಯ ಆಡಳಿತಕೇಂದ್ರನಗರ.  ಅಹಮದಾಬಾದಿಗೆ ನೈಋತ್ಯದಲ್ಲಿ 201 ಕಿ. ಮೀ. ದೂರದಲ್ಲಿದೆ.  ಜನಸಂಖ್ಯೆ 651007 (1991).  ನಗರದಲ್ಲಿ 1870 ರಲ್ಲಿ ಸ್ಥಾಪಿತವಾದ ರಾಜಕುಮಾರ್ ಕಾಲೇಜೂ ಸೇರಿದಂತೆ ಅನೇಕ ಶಾಲಾಕಾಲೇಜುಗಳು ಇವೆ.  ಗುಜರಾತಿನ ಎಲ್ಲಾ ಮುಖ್ಯ ನಗರಗಳಿವೆ.  ಇಲ್ಲಿಂದ ಉತ್ತಮ ಸಂಚಾರ ಸೌಲಭ್ಯವಿದೆ.  ಭಾರತದ ಪಶ್ಚಿಮ ರೈಲ್ವೆಯ ಒಂದು ಪ್ರಮುಖ ರೈಲುನಿಲ್ದಾಣ ಕೇಂದ್ರ ಹಾಗೂ ವಿಮಾನನಿಲ್ದಾಣವೂ ಇದೆ.  ಈ ನಗರ ಒಂದು ದೊಡ್ಡ ವ್ಯಾಪಾರ ವಾಣಿಜ್ಯ ಕೇಂದ್ರವೂ ಆಗಿದೆ.

ರಾಜಕೋಟೆ ಹಿಂದೆ ದೇಶೀರಾಜನೊಬ್ಬನಿಗೆ ಸೇರಿದ್ದು ಭಾರತ ಸ್ವಾತಂತ್ರ್ಯ ಪಡೆದ ನಂತರ 1948 ರಲ್ಲಿ ಸೌರಾಷ್ಟ್ರರಾಜ್ಯಕ್ಕೆ ಸೇರಿತು.  ಮುಂದೆ ಮುಂಬಯಿ ರಾಜ್ಯದ ಒಂದು ಜಿಲ್ಲೆಯಾಗಿ (1956) ಅನಂತರ 1960 ರಲ್ಲಿ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಸ್ಥಾಪನೆಯೊಡನೆ  ಗುಜರಾತಿನ ಒಂದು ಜಿಲ್ಲೆಯಾಯಿತು.  ಮಹಾತ್ಮಗಾಂಧಿಯವರ ತಂದೆ ಕರಮ್‍ಚಂದ್ ಗಾಂಧಿರಾಜಕೋಟೆಯಲ್ಲಿ ಕೆಲವು ಕಾಲ ದಿವಾನರಾಗಿದ್ದರು.  ಗಾಂಧಿಯವರು ತಮ್ಮ 18ನೆಯ ವಯಸ್ಸಿನಲ್ಲಿ ಇಲ್ಲಿನ ಆಲ್ಫ್ರೇಡ್ ಪ್ರೌಢಶಾಲೆಯಲ್ಲಿ ಓದಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಮುಗಿಸಿದರೆಂದು ತಿಳಿದುಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ